ಕರ್ನಾಟಕದಲ್ಲಿ ಫಾಕ್ಸಕಾನ

ಗೋಪಾಲ ಕುಲ್ಕರ್ಣಿ | 28 Mar 2023

ಫಾಕ್ಸಕಾನ್ ಎಂಬ ಕಂಪನಿ ಕರ್ನಾಟಕದಲ್ಲಿ ಆ್ಯಪಲ್ ಕಂಪನಿಯ ಪ್ರಸಿದ್ಧ ಐಫೊನ್ ಹಾಗೂ ಬೇರೆ ಉತ್ಪನ್ನಗಳನ್ನು ಉತ್ಪಾದಿಸುವ ಬಹುದೊಡ್ದ ಕಾರ್ಖಾನೆ ನಿರ್ಮಿಸಲಿದೆ ಎಂದು ಸುದ್ದಿ ಮಾಧ್ಯಮಗಳಲ್ಳಿ ಕೆಲವು ದಿನಗಳ ಹಿಂದೆ ವರದಿಯಾಗಿದೆ. ಫಾಕ್ಸಕಾನ್ ಸಂಸ್ಥೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಲ್ಲಿ ವಿಶ್ವದಲ್ಲೆ ಅತಿ ದೊಡ್ಡದು. ಈಗಾಗಲೆ ಈ ಕಂಪನಿಯ ಕಾರ್ಖಾನೆಗಳು ತಮಿಳುನಾಡು ಹಾಗು ಆಂಧ್ರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕದ ಹೊಸ ಘಟಕಕ್ಕಾಗಿ ಫಾಕ್ಸಕಾನ್ ಸಂಸ್ಥೆಯು ಸುಮಾರು ೮೦೦೦ ಕೋಟಿ ರೂಪಾಯಿ ಹೂಡಿಕೆ ಮಾಡಬಹುದೆಂದು ಅಂದಾಜಿಸಲಾಗಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆ್ಯಪಲ್ ಹಾಗೂ ಇನ್ನಿತರ ಬಹುರಾಷ್ಟ್ರೀಯ ಕಂಪನಿಗಳು ಚೀನಾ ದೇಶದ ಮೇಲಿರುವ ತಮ್ಮ ಉತ್ಪನ್ನಗಳ ಉತ್ಪಾದನಾ ನಿರ್ಭರತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೇರೆ ದೇಶಗಳಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಇದು ಆ್ಯಪಲ್ ಕಂಪನಿಯ ಐಫೋನ್ ತಯಾರಿಕೆಯ ಅತಿದೊಡ್ಡ ಪಾಲುದಾರಾದ ಫಾಕ್ಸಕಾನ್ ಕಂಪನಿಯ ಕರ್ನಾಟಕದಲ್ಲಿ ಉದ್ದೇಶಿತ ಹೂಡಿಕೆ ಹಿಂದಿರುವ ಕಾರಣ. ಕರ್ನಾಟಕ ಸರಕಾರ ಈಗಾಗಲೆ ಈ ಉದ್ದೇಶಿತ ಕಾರ್ಖಾನೆಗಾಗಿ ಸುಮಾರು ೩೦೦ ಎಕರೆ ಭೂಮಿ ರಾಜಧಾನಿ ಬೇಂಗಳೂರಿನ ಹತ್ತಿರ ಗುರುತಿಸಿ ಈ ಯೋಜನೆಗೆ ಅನುಮೊದನೆ ನೀಡಿದೆ.

ಈ ಹೂಡಿಕೆ ಕರ್ನಾಟಕದಲ್ಲಿ ಆಗುತ್ತಿರುವುದು ಕನ್ನಡಿಗರಿಗೆ ಖುಷಿ ಕೊಡುವ ವಿಷಯ. ಆದರೆ ಈ ತರಹದ ಬೆಳವಣಿಗೆಗಳು, ಆರ್ಥಿಕ ಹೂಡಿಕೆಗಳು ಬೆಂಗಳೂರಿನ ಸುತ್ತಮುತ್ತಲೇ ಆಗಬೇಕೆ? ಇಡಿ ಕರ್ನಾಟಕದಲ್ಲಿ ಬೇರೆ ಯಾವ ನಗರ ಹಾಗು ಅದರ ಸುತ್ತಮುತ್ತಲಿನ ಪ್ರದೇಶಗಳು ಇಂತಹ ಯೋಜನೆಗಳಿಗೆ ಸೂಕ್ತವಾಗಿ ಕಾಣುವಿದಿಲ್ಲವೆ? ಕರ್ನಾಟಕ ಸರಕಾರಕ್ಕೆ ಕಾಣುವುದು ಬರಿ ಬೆಂಗಳೂರು ಎಂದು ಪದೆಪದೆ ಮೂಡಿಬರುವ ಭಾವನೆಗೆ ಪುಷ್ಟಿ ಮತ್ತೊಂದು ಉದಾಹರಣೆ ಕೊಡುವಂತಹುದು ಈ ವರದಿ. ಇಂದು ರಾಜ್ಯದಲ್ಲಿ ಯಾವುದೇ ನವೀನ ಯೊಜನೆ, ಆದರಲ್ಲೂ ಖಾಸಗಿ ಕಂಪನಿಗಳ ದೊಡ್ದ ಹೂಡಿಕೆಗಳ ವಿಷಯ ಬಂದಾಗಲಂತೂ ಕೆಳಿಬರುವ ಹೆಸರು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶ ಅಷ್ಟೆ. ಇದು ಬೇರೆ ಜಿಲ್ಲೆಗಳ ಜನರಲ್ಲಿ ಕಾಡುವ ಸಾಮಾಜಿಕ ಹಾಗು ಆರ್ಥಿಕ ಅಸಮತೋಲನೆಯ ಮನೋಭಾವನೆಗಳಿಗೆ ಇಂಬು ಕೊಟ್ಥರೆ ಅಶ್ಚರ್ಯವಿಲ್ಲ.

ಒಂದು ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಈಗಾಗಲೇ ಕರ್ನಾಟಕದ ಒಟ್ಟು ಜನಸಂಖ್ಯೆಯ ಸುಮಾರು ಇಪ್ಪತ್ತು ಪ್ರತಿಶತ ಜನ ವಾಸಿಸುತ್ತಿದ್ದಾರೆ. ಬೆಂಗಳೂರು ನಗರ ಜನಸಂಖ್ಯೆಯಲ್ಲಿ ಎರಡನೆ ಸ್ಥಾನದಲ್ಲಿರುವ ನಗರಕ್ಕಿಂತ ಸುಮಾರು ೧೪ ಪಟ್ಟು ಜಾಸ್ತಿ ಜನಸಂಖ್ಯೆ ಹೊಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಯುವಜನ ಬೆಂಗಳೂರಿಗೆ ಕೆಲಸವನ್ನರಿಸಿ ಬರಬೇಗಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದು ವೃತ್ತಿಪರ ಪದವಿ ಗಳಿಸಿದ ಯುವಕರಿಗಷ್ಟೆ ಸಿಮಿತವಾಗಿಲ್ಲ. ಇಂದು ನಿಮ್ಮ ಹಾಲು, ದಿನಸಿ ವಸ್ತುಗಳನ್ನು ನಿಮ್ಮ ಮನೆಗೆ ತಲುಪಿಸುವ ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್ಸ ಇರಬಹುದು ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿರುವ ಶಸ್ತ್ರಚಿಕಿತ್ಸಕರಿರಬಹುದು, ಇವರೆಲ್ಲ ಬೆಂಗಳೂರಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಲಸೆ ಬಂದವರೆ ಹಾಗೂ ದಿನೆದಿನೆ ಇನ್ನೂ ಬರುತ್ತಿರುವವರೆ. ತಮ್ಮ ಜಿಲ್ಲೆ ಅಥವಾ ಸಮೀಪದ ಜಿಲ್ಲೆ, ನಗರಗಳಲ್ಲಿ ಸರಿಯಾದ ಉದ್ಯೋಗಾವಕಶಗಳು ಇಲ್ಲದಿರುವುದೇ ಇದಕ್ಕೇ ಮುಖ್ಯ ಕಾರಣ. ಹಬ್ಬ ಹರಿದಿನಗಳು ಬಂದಾಗ ಬೆಂಗಳೂರಿನಿಂದ ವಿಶೆಷ ರೈಲು ಓಡಿಸಲು ಬರುವ ಜನಸಾಮಾನ್ಯರ ಬೇಡಿಕೆ ಹಾಗೂ ಲಾಬಿ ಮಾಡಿ ವಿಶೇಷ ರೈಲು ಓಡಿಸಿರುವುದೇ ಸಾಧನೆಯಂತೆ ಬಿಂಬಿಸುವ ಜನಪ್ರತಿನಿಧಿಗಳ ‘ಟ್ವೀಟ್’ಗಳು ಈ ಬೃಹತ್ ವಲಸೆಗಿರುವ ಸಾಕ್ಷಿ. ಇದರರ್ಥ, ಕೇವಲ ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರಷ್ಟೆ ಸಾಲದು. ಅದಕ್ಕೆ ಪೂರಕವಾಗಿ ಸ್ಥಳೀಯ ಜನಸಂಖ್ಯೆ ಪೋಷಿಸುವ ಅರ್ಥವ್ಯವಸ್ಥೆ ಕೂಡ ನಿರ್ಮಿಸಬೇಕು. ಪರಿಸ್ಥಿತಿ ಹಿಗೀದ್ದರೂ ಸರ್ಕಾರ ಹಾಗೂ ಆಡಳಿತ ಅಧಿಕಾರಿಗಳು ವಿಕೇಂದ್ರಿಕೃತ ಬೆಳವಣಿಗೆಗೆ ಒತ್ತು ಕೆೊಡುವುತ್ತಿರುವುದು ಕಾಣಿಸುತ್ತಿಲ್ಲ. ಯಾವುದೇ ಕೈಗಾರಿಕೆ ಅಥವಾ ಕಂಪನಿಗಳ ಮುಖ್ಯಸ್ಥರ ಜೊತೆ ರಾಜ್ಯದಲ್ಲಿ ಹೂಡಿಕೆ ಸೆಳೆಯುವ ಬಗ್ಗೆ ಸಮಾಲೋಚಿಸುವಾಗ ಬೆಂಗಳೂರು ಕೇಂದ್ರೀಕೃತ ಪ್ರದೇಶಗಳನ್ನೇ ಪ್ರದರ್ಶಿಸುತ್ತಾರೆ. ಬೇರೆ ನಗರಗಳು ಅಥವಾ ಜಿಲ್ಲೆಗಳು ಈ ಪಟ್ಟಿಗೆ ಸೇರುವುದೇ ಇಲ್ಲ.

ಮುಂಚೆ ಇದಕ್ಕೆ ಹಲವು ಕಾರಣಗಳು ಅನಾಯಾಸವಾಗಿ ಸಿದ್ಧವಾಗಿರುತ್ತಿದ್ದವು. ಅವುಗಳೆಂದರೇ ಮೂಲ ಸೌಕರ್ಯಗಳ ಕೊರತೆ, ಸಾರಿಗೆ ಸೌಲಭ್ಯಗಳ ಅಪೂರ್ಣತೆ, ವಿಮಾನಯಾನದ ಸೌಲಭ್ಯ ಇರದೇ ಇದ್ದುದ್ದು, ನಿರಂತರ ವಿದ್ಯುತ್ ಕೊರತೆ, ಕೌಶಲ್ಯತೆಯುಳ್ಳ ಕೆಲಸಗಾರರ ಕೊರತೆ, ಇತ್ಯಾದಿ. ಆದರೆ ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದೆ. ರಾಜ್ದ ಪ್ರತಿ ಜಿಲ್ಲೆಯು ಮೂಲಭೂತ ಸೌಕರ್ಯ, ಸಾರಿಗೆ, ಶಿಕ್ಷಣ ಕ್ಷೆತ್ರಗಳಲ್ಲಿ ಮಹತ್ತರ ಪ್ರಗತಿ ಸಾಧಿಸಿವೆ. ಉದಾಹರಣೆಗಾಗಿ ನಮ್ಮ ಹಿಂದುಳಿದ ಜಿಲ್ಲೆಗಳಾಗಿ ಗುರುತಿಸಲ್ಪಡುವ ಬೀದರ್, ಕಲಬುರಗಿ ನಗರಗಳನ್ನೇ ತೆೊಗೊಳ್ಳಿ. ಈ ನಗರಗಳಲ್ಲೀಗ ನೂತನ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಹಲವು ವೈದ್ಯಕಿಯ, ತಾಂತ್ರಿಕ, ಕೈಗಾರಿಕಾ ತರಬೇತು ಸಂಸ್ಥೆಗಳು ಸ್ಥಾಪಿತವಾಗಿ, ಕಾರ್ಯ ನಿರ್ವಹಿಸುತ್ತ ವರ್ಷಗಳೆ ಕಳೆದಿವೆ. ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿಗಳು ಈ ನಗರಗಳ ಮೂಲಕ ಹಾದು ಹೋಗುತ್ತಿವೆ. ಬಹುಮುಖ್ಯವಾಗಿ ದೇಶದ ಪ್ರಮುಖ ನಗರಗಳಲ್ಲೊಂದಾದ ಹೈದರಾಬಾದ್ ನಗರ ಈ ಜಿಲ್ಲೆಗಳಲ್ಲಿಂದ ಸುಧಾರಿತ ರಸ್ತೆಗಳ ಪರಿಣಾಮದಿಂದ ಕೇವಲ ೨ ರಿಂದ ೩ ಗಂಟೆಗಳಷ್ಟು ಸಮಿಪದಲ್ಲಿದೆ. ಹೈದ್ರಾಬಾದ್ ವಿಮಾನ ನಿಲ್ದಾಣದಿಂದ ಬೀದರ್ ನಗರಕ್ಕೆ ಎರಡುವರೆ ಗಂಟೆಗಳಲ್ಲಿ ತಲುಪಬಹುದು. ಆದರೂ ಈ ಭೌಗೋಳಿಕ ಅನುಕೂಲತೆಯನ್ನು ನಮಗೆ ಉಪಯೋಗಿಸಿಕೊಳ್ಳೊಕ್ಕೆ ಆಗ್ತಾ ಇಲ್ಲ. ಬಹುಶಃ ನಮ್ಮ ಸರಕಾರ ಹಾಗೂ ಅಧಿಕಾರಿಗಳಿಗೆ ಈ ಅನುಕೂಲತೆಗಳು ಗೋಚರಿಸುವುದಿಲ್ಲ. ಆದರೆ ಪಕ್ಕದ ತಮಿಳುನಾಡು ಇದಕ್ಕೆ ಸಮನಾದ ಅನುಕೂಲತೆಗಳಿಂದ ಅನುಭವಿಸುತ್ತಿರುವ ಯಶಸ್ಸು ನಮ್ಮ ಕಣ್ಣೇದುರಿಗೆ ಇದೆ. ಆ ರಾಜ್ಯ ತನ್ನ ಕೆಲವು ಪ್ರದೇಶಗಳಿಗಿರುವ ಬೆಂಗಳೂರಿನ ಸಾಮಿಪ್ಯವನ್ನೇ ಬಂಡವಾಳವಾಗಿರಿಸಿಕೊಂಡು ಬಹುದೊಡ್ಡ ಪ್ರಮಾಣದ ಹೂಡಿಕೆ ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಹೊಸುರು, ಧರ್ಮಪುರಿ, ಕೃಷ್ಣಗಿರಿ ಪ್ರದೇಶಗಳು ಇಂದು ದೇಶದಲ್ಲೇ ಹೆಸರುವಾಸಿಯಾದ ಕೈಗಾರಿಕೆ ವಲಯಗಳಾಗಿವೆ. ದ್ವಿಚಕ್ರ ವಾಹನಗಳು, ಎಲೆಕ್ಥ್ರಾನಿಕ್ಸ ಉತ್ಪನ್ನಳು, ಎಲೆಕ್ಥ್ರಿಕ್ (ವಿದ್ಯುತ್ ಆಧರಿಸಿ ಚಲಿಸುವ) ವಾಹನಗಳು ಮುಂತಾದವುಗಳು ಇಲ್ಲಿ ಉತ್ಪಾದಿಸಲ್ಪಡುತ್ತಿವೆ ಹಾಗೂ ಲಕ್ಷಾಂತರ ಜನರಿಗೆ ನೇರವಾಗಿ ಹಾಗು ಪರೋಕ್ಷವಾಗಿ ಉದ್ಯೋಗ ದೊರಕಿಸುತ್ತವೆ. ಪಕ್ಕದ ಆಂಧ್ರ ಪ್ರದೇಶದಲ್ಲಿರುವ ಶ್ರೀ ಸಿಟಿ ಚೆನ್ನೈ ನಗರಕ್ಕಿರುವ ತನ್ನ ಸಾಮಿಪ್ಯವನ್ನು ಬಳಸಿಕೊಂಡು ದೇಶದಲ್ಲಿರುವ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಒಂದಾಗಿ ಬೆಳೆದು ನಿಂತಿರುವುದು ಇನ್ನೊಂದು ಉದಾಹರಣೆ.

ಯಾವುದೇ ಒಂದು ಪ್ರದೇಶ ಕೈಗಾರಿಕೆ ವಲಯದಲ್ಲಿ ಮುಂಚುಣಿಗೆ ಬರಬೇಕಾದರೆ ಮೊದಲಿಗೆ ಒಂದು ಹೆಸರುವಾಸಿಯಾದ ಕಂಪನಿಯಿಂದ ಹೂಡಿಕೆ ತನ್ನದಾಗಿಸಿಕೊಳ್ಳಬೇಕು. ಇಂಗ್ಲಿಷಿನಲ್ಲಿ Big Ticket Project ಅಂತಾರಲ್ಲ, ಅದು. ರಾಜ್ಯದ ಆಡಳಿತವರ್ಗ ಅದಕ್ಕಾಗಿ ದೂರದೃಷ್ಟಿ ಬೆಳೆಸಿಕೊಂಡಿರಬೇಕು. ಉದಾಹರಣೆಗೆ, ಕೆಲವು ವರ್ಷಗಳ ಹಿಂದೆ ಪ್ರಸಿದ್ಧ ಟಾಟಾ ಮೊಟರ್ಸ ಕಂಪನಿ ತನ್ನ ಬಹುನಿರೀಕ್ಷಿತ ನ್ಯಾನೊ ಕಾರು ಉತ್ಪಾದಿಸುವ ಕಾರ್ಖಾನೆಗಾಗಿ ಸ್ಥಳ ಹುಡುಕಿತ್ತುರುವಾಗ ಅಂದಿನ ಗುಜರಾತ್ ಸರಕಾರವು ಸಾನಂದ್ ಎಂಬ ಪ್ರದೇಶದಲ್ಲಿ ಕಾರ್ಖಾನೆ ಸ್ಥಾಪಿಸುವ ಪ್ರಸ್ತಾವಾನೆ ಮುಂದಿಟ್ಟು ಸ್ವಾಗಾತಿಸಿತು. ಬೇರೆ ರಾಜ್ಯಗಳಿಂದ ಸಾಕಷ್ಟು ಪೈಪೊಟಿ ಇದ್ದರೂ ಗುಜರಾತ್ ಸರಕಾರ, ಅಂದಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿಯವರ ನೆತೃತ್ವದಲ್ಲಿ, ಆ ಯೋಜನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಕೆಲವೆ ವರ್ಷಗಳಲ್ಲಿ ಸುಜುಕಿ, ಫೊರ್ಡ ಮೊದಲಾದ ವಾಹನ ಜಗತ್ತಿನ ದಿಗ್ಗಜ ಕಂಪನಿಗಳು ಕಾರು ಹಾಗು ಬಿಡಿಭಾಗಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟವು. ದೂರದೃಷ್ಥಿತನದಿಂದ ಕೂಡಿದ ಒಂದು ನಿರ್ಣಯದಿಂದ ಅಂದು ಯಾರು ಕೇಳರಿಯಾದ ಸಾನಂದ್ ಪ್ರದೇಶವು ಇಂದು ಭಾರತವಷ್ತೇ ಅಲ್ಲ, ಜಗತ್ತಿನಲ್ಲೇ ವಾಹನೋತ್ಪಾದನೆಯ ಮುಂಚುಣಿಯಲ್ಲಿ ಗುರುತಿಸಲ್ಪಡುವಂತಾಗಿದೆ.

ಇಂದು ನಮ್ಮ ರಾಜ್ಯಕ್ಕೂ ರಾಜ್ಯದ ಸರ್ವತೋನ್ಮುಖ ಬೆಳವಣಿಗೆಗಾಗಿ ಬೇಕಾಗಿರುವುದು ಇದೇ ತರಹದ ದೂರದೃಷ್ಟಿ. ಪರಿಸ್ಥಿತಿ ಕೈಮೀರುವ ಮುಂಚೆ ರಾಜ್ಯದ ಹಲವೆಡೆ ಖಾಸಗಿ ಹೂಡಿಕೆ ಸೆಳೆಯಲು ಸರಕಾರ ಸರ್ವ ಪ್ರಯತ್ನ ಮಾಡಬೇಕು. ಪ್ರತಿ ಜಿಲ್ಲೆಗಳ ಜನಪ್ರತಿನಿಧಿಗಳು ಬರೀ ಹೊಸ ರೈಲು ಗಿಟ್ಟಿಸುಕೊಳ್ಳುವುದೆ ಸಾಧನೆಯೆಂದು ಬಿಂಬಿಸುವುದನ್ನು ಬಿಟ್ಟು, ಜಿಲ್ಲೆಗಳಲ್ಲಿ ಆರ್ಥಿಕ ಹೂಡಿಕೆ ಸೆಳೆಯಲು ಲಾಬಿ ನಡೆಸಬೇಕು. ವಲಸೆ ಕಮ್ಮಿಯಾದರೆ ವಿಶೇಷ ರೈಲುಗಳ ಬೇಡಿಕೆಗಳೂ ಕಡಿಮೆಯಾಗುವುದಲ್ಲವೇ?